ಎಲೆಕ್ಟ್ರಾನಿಕ್ ವರ್ಣವೀಕ್ಷಕಗಳು: ನಕಾಶೆ ಕೆತ್ತನೆಯಲ್ಲಿ (ಎನ್ಗ್ರೇವಿಂಗ್) ಎಲೆಕ್ಟ್ರಾನಿಕ್ ನಕಾಶೆ ಕೆತ್ತನೆ ಸಾಧನೆಗಳಂತೆಯೇ ಇರುವ, ಆದರೆ ಅಂತಿಮ ಉತ್ಪನ್ನವಾಗಿ ನಕಾಶೆ ಕೆತ್ತಿದ ಫಲಕದ ಬದಲು ಸ್ಕ್ರೀನ್ ಮಾಡಲ್ಪಟ್ಟ ಅಥವಾ ನಿರಂತರ ಟೋನ್ ಫೋಟೊಗ್ರಾಫಿಕ್ ಫಿಲಂ ಅಥವಾ ಫಲಕ ನೀಡುವ ಸಾಧನೆಗಳು (ಎಲೆಕ್ಟ್ರಾನಿಕ್ ಕಲರ್ ಸ್ಕ್ಯಾನರ್ಸ್‌). ಹೀಗಾಗಿ ಇವು ಸಾಂಪ್ರದಾಯಿಕ ಲಿಪಿಮುದ್ರಣ ಕ್ಷೇತ್ರಕ್ಕಿಂತ ಲಿಥೊ ಮತ್ತು ಗ್ರವ್ಯೂರ್ ಫಲಕ ತಯಾರಿಕೆಯ ಕ್ಷೇತ್ರದಲ್ಲಿ ಬಹಳ ಉಪಯೋಗಕರವಾಗಿವೆ. ಪೌಡರ್ರಹಿತ ಕೊರೆತ (ಎಚ್ಚಿಂಗ್) ಮತ್ತು ಇತರ ಸುಧಾರಿತ ಪದ್ಧತಿಗಳಿಂದ ಚಿತ್ರಗಳನ್ನು ಕೆತ್ತಿ ಲಿಪಿಮುದ್ರಣ ರೋಟರಿ ಯಂತ್ರಗಳಲ್ಲಿ ಮುದ್ರಿಸುವುದೇ ಆದರೆ ಆಗಲೂ ಈ ಯಂತ್ರಗಳು ಅಷ್ಟೇ ಉಪಯುಕ್ತವಾಗುತ್ತವೆ. ಉದಾಹರಣೆಗೆ ಈ ಯಂತ್ರದಲ್ಲಿ ಪಡೆದ ಸ್ಕ್ರೀನ್ ಮಾಡಿದ ವರ್ಣ ಪ್ರತ್ಯೇಕಿಕರಣಗಳನ್ನು (ಕಲರ್ ಸೆಪೆರೇಷನ್ಸ್‌) ಬೇಕಾದಲ್ಲಿ ಅಚ್ಚು ವಸ್ತುವಿನೊಡನೆ (ಟೈಪ್ ಮ್ಯಾಟರ್) ಸಿಲಿಂಡರ್ ಮೇಲೆ ಮುದ್ರಿಸಿ ಆ ಸಿಲಿಂಡರನ್ನು ಡೌ ಕೊರೆತ (ಎಚ್ಚಿಂಗ್) ಯಂತ್ರದಲ್ಲಿ ಒಂದೇ ಬಾರಿಗೆ ಕೆತ್ತನೆ ಮಾಡಿ ಮುದ್ರಣಕ್ಕೆ ಸಜ್ಜುಗೊಳಿಸಬಹುದು.

ವೇರಿಯೊ-ಕ್ಲಿಸ್ಟೊಗ್ರಾಫ್ ಯಂತ್ರ ವರ್ಣವೀಕ್ಷಕಗಳ ವರ್ಗಕ್ಕೆ ಸಹ ಸೇರುತ್ತದೆ. ಕಾರಣ, ಲಿಪಿ ಮುದ್ರಣ ಪಡಿಯಚ್ಚುಗಳನ್ನು (ಬ್ಲಾಕ್ಸ್‌) ಕೆತ್ತನೆಮಾಡುವುದರ ಜೊತೆಗೆ ಅದು ನಿರಂತರ ಟೋನ್ ಅಥವಾ ಸ್ಕ್ರೀನ್ ಮಾಡಿದ ಋಣಗಳನ್ನು (ನೆಗಟಿವ್ಸ್‌) ಅಥವಾ ಧನಗಳನ್ನೂ (ಪಾಸಿಟಿವ್ಸ್‌) ತಯಾರಿಸಬಲ್ಲುದು. ಕೇವಲ ವರ್ಣವೀಕ್ಷಕಗಳಂತೆ ಮಾತ್ರ ಕಾರ್ಯವೆಸಗುವ ಸರಳವಾದ, ಆದರೆ ವಿಶೇಷವಾಗಿ ಅದೇ ಕಾರ್ಯಕ್ಕೆ ಮಾತ್ರ ನಿರ್ಮಿಸಲ್ಪಟ್ಟಿರುವ ಯಂತ್ರಗಳೂ ಹಲವಿವೆ. ಇವುಗಳ ಪೈಕಿ ವರ್ಣನಕಾಶೆ (ಕಲರ್ ಗ್ರಾಫ್) ಎಂಬುದು ಒಂದು ಇದರಲ್ಲಿ ಪುರ್ಣವಾಗಿ ವರ್ಣಪರಿಷ್ಕೃತವಾದ ಧನಗಳನ್ನು ಉತ್ಪಾದಿಸಬಹುದು. ಇದು ಒಂದೇ ವರ್ಣರಂಜಿತ ಮೂಲಪ್ರತಿಯೊಡನೆ ನೇರವಾಗಿ ಪ್ರವರ್ತಿಸಲಾರದು. ಮೂರು ಸರಳವಾದ ವರ್ಣ ವಿಭಾಜಕ ಋಣಗಳನ್ನು ಆಳವಡಿಸಿ ಕೊಟ್ಟಾಗ ಮಾತ್ರ ತನ್ನ ಕಾರ್ಯವನ್ನು  ಮಾಡಬಲ್ಲುದು. ಮತ್ತು ಏಕಕಾಲದಲ್ಲಿ ಎಲ್ಲ ಮೂರು ಅಥವಾ ನಾಲ್ಕು ವರ್ಣ ಪರಿಷ್ಕೃತ ಧನಗಳನ್ನು ತಯಾರಿಸಬಲ್ಲುದು.
(ಡಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ